ತಿಮ್ಮಯ್ಯ, ಕೊಡಂದೆರ ಸುಬ್ಬಯ್ಯ 
	1906-1965 . ಶ್ರೇಷ್ಠ ಸೇನಾನಾಯಕ, ಹಿರಿಯ ಮುತ್ಸದ್ದಿ, ದಕ್ಷ ಆಡಳಿತಗಾರ ಎಂದು ಸುಪ್ರಸಿದ್ಧರಾದವರು. ಹುಟ್ಟು ಸೈನಿಕರಾದ ಇವರು ಎರಡನೆಯ ಮಹಾ ಯುದ್ಧದಲ್ಲಿಯೂ ತರುವಾಯ ಸ್ವತಂತ್ರ ಭಾರತದ ಕಾಶ್ಮೀರ ಕಣದಲ್ಲಿಯೂ ಪ್ರದರ್ಶಿಸಿದ ಯುದ್ಧ ತಂತ್ರಗಳು, ಕೊರಿಯಾ ಹಾಗೂ ಸೈಪ್ರಸ್‍ಗಳಲ್ಲಿ ನಿರ್ವಹಿದ ಶಾಂತಿದೌತ್ಯ, ಮೊದಲಿಗೆ ಬ್ರಿಟಿಷ್ ಸೈನ್ಯದ ಅಂಗವಾಗಿದ್ದ ಭಾರತ ಸೇನಾಬಲವನ್ನು ಭಾರತೀಕರಿಸುವಲ್ಲಿ ತೋರ್ಪಡಿಸಿದ ವಿವೇಚನೆ. ತಮ್ಮ ಅನುಯಾಯಿ ಸೈನಿಕರಿಗಾಗಿ ಮಾಡಿದ ಸುಧಾರಣೆಗಳು, ಮೇಲಾಗಿ ಸ್ವಂತ ಸಾಹಸ ದುಡಿಮೆ ಹಾಗೂ ಮುಂದಾಳುತನದಿಂದ ಸ್ವತಂತ್ರ ಭಾರತದ ಸೈನ್ಯಕ್ಕೆ ದೊರಕಿಸಿಕೊಟ್ಟ ಅಂತಸ್ತು. ಇತ್ಯಾದಿ, ಇವರನ್ನು ಜಗತ್ತಿನ ಸಾರ್ವಕಾಲಿಕ ಮಹಾಸೇನಾನಾಯಕರ ಸಾಲಿನಲ್ಲಿ ನಿಲ್ಲಿಸಿವೆ. ಒಬ್ಬ ಜನರಲ್ ತಿಮ್ಮಯ್ಯ ಒಂದು ಕಾಲದಲ್ಲಿ ಅಥವಾ ಒಂದು ರಾಷ್ಟ್ರದಲ್ಲಿ ಯಾವಾಗಲೂ ಜನಿಸುವುದಿಲ್ಲ, ಅವರ ಮಾದರಿಯಂತಿರಲು ಸಾಧ್ಯವೂ ಇಲ್ಲ ಎಂಬುದಾಗಿ ಹಿರಿಯ ಜನರಲ್ ಆದ ಭಗತ್ ಅವರು ಹೇಳಿರುವ ಮಾತು ಸಾರ್ಥಕವಾಗಿದೆ. ಕೊಳ್ಗುಳದಲ್ಲಿ ಸಾವುನೋವುಗಳನ್ನು ಅನುಭವಿಸಲು ಒಬ್ಬ ಸಿದ್ಧನಿರಲೇಬೇಕು; ಹಿಂದೆ ಕುಳಿತ ನಿಷ್ಕøಯಾವಂತನಲ್ಲ, ಬದಲು ದಟ್ಟತನದಿಂದ ಮುಂದೆ ಸಾಗಿ ಅಪಾಯಗಳನ್ನು ಎದುರಿಸುವಾತನೇ ನಿಜವಾದ ಜನರಲ್ ಎಂಬುದಾಗಿ ತಿಮ್ಮಯ್ಯನವರು ಒಮ್ಮೆ ಹೇಳಿದ ಮಾತು ಸ್ವತಃ ಅವರ ಬದುಕಿನ ಸಾರಸರ್ವಸ್ವವಾಗಿದೆ. 

	1906 ರ ಮಾರ್ಚ್ 31ರಂದು ಕೊಡಗಿನಲ್ಲಿ ಕೊಡಂದೆರ ತಿಮ್ಮಯ್ಯ ಮತ್ತು ಸೀತವ್ವ ದಂಪತಿಗಳ ಮಗನಾಗಿ ಹುಟ್ಟಿದ ಈ ಅಣುಗನನ್ನು ಸುಬ್ಬಯ್ಯ ಎಂದು ಹೆಸರಿಸಿದರು. ಆದರೆ ಶಾಲೆಗೆ ಸೇರಿಸುವಾಗ ಇವರ ಹೆಸರು ಕೆ. ಎಸ್, ತಿಮ್ಮಯ್ಯ ಎಂದು ದಾಖಲಾದ್ದರಿಂದ ಈ ಹೆಸರೇ ಇವರಿಗೆ ಶಾಶ್ವತವಾಗಿ ಉಳಿಯಿತು. ಶ್ರೀಮಂತ ಮನೆತನದಲ್ಲಿ ಜನಿಸಿದ ತಿಮ್ಮಯ್ಯನವರ ವಿದ್ಯಾಭ್ಯಾಸ ಮೊದಲಿಗೆ ಕೂನೂರಿನ ಸೇಂಟ್ ಜೋಸೆಫ್ ಶಾಲೆಯಲ್ಲಿಯೂ ತರುವಾಯ ಬೆಂಗಳೂರಿನ ಬ್ರಿಟಿಷ್ ಕಾಟನ್ ಶಾಲೆಯಲ್ಲಿಯೂ ನಡೆಯಿತು. ಹುಟ್ಟಿನಿಂದಲೇ ಇವರು ಉತ್ತಮ ದೇಹದಾಢ್ರ್ಯ ಮತ್ತು ವ್ಯಕ್ತಿತ್ವ ಪಡೆದು ಬಂದಿದ್ದರು. ಇವರ ಮೊದಲ ಒಲವು ಆಟ ಓಟಗಳು. ಅಧಿಕ ಸಾಮಥ್ರ್ಯವಂತನಾದ ತಮ್ಮ ಮಗ ಭಾರತದ ಸೇನಾಬಲವನ್ನು ಓರ್ವ ಅಧಿಕಾರಿಯಾಗಿ ಸೇರಬೇಕೆಂದು ತಂದೆತಾಯಿ ಬಯಸಿದರು. ಇದಕ್ಕಾಗಿ ತಿಮ್ಮಯ್ಯನವರನ್ನು ಡೆಹರಾಡೂನಿನ ರಾಯಲ್ ಇಂಡಿಯನ್ ಮಿಲಿಟರಿ ಶಾಲೆಗೆ ಸೇರಿಸಲಾಯಿತು. ಅಲ್ಲಿನ ಹದಿನೆಂಟು ತಿಂಗಳ ಅತಿ ಕಠಿಣ ಹಾಗೂ ಕರಾರುವಾಕ್ಕಾದ ಸೇನಾಶಿಕ್ಷಣದಲ್ಲಿ ಯಶಸ್ವಿಯಾಗಿ ತೇರ್ಗಡೆಗೊಂಡ ಇವರನ್ನು ಅಂತಿಮ ಶಿಕ್ಷಣಕ್ಕಾಗಿ ಇಂಗ್ಲೆಂಡಿನ ಸ್ಯಾಂಡ್ ಹೆಸ್ರ್ಟ್ ಮಿಲಿಟಿರಿ ಕಾಲೇಜಿಗೆ ಕಳಿಸಿದರು ; ಸಾವಿರಾರು ಮಂದಿ ಭಾರತೀಯ ಯುವಕರ ಪೈಕಿ ಆರು ಮಂದಿಯನ್ನು ಮಾತ್ರ ಭಾರತದ ವೈಸ್ ರಾಯಿಯವರು ಈ ಉಚ್ಚ ಶಿಕ್ಷಣಕ್ಕಾಗಿ ಆಯ್ದಿದ್ದರು; ಆ ಆರರಲ್ಲಿ ತಿಮ್ಮಯ್ಯನವರೂ ಒಬ್ಬರು. ಸ್ಯಾಂಡ್‍ಹೆಸ್ರ್ಟ್‍ನ ಹದಿನೆಂಟು ತಿಂಗಳುಗಳ ಶಿಕ್ಷಣಾವಧಿಯನ್ನು ತುಂಬ ಹಿರಿಮೆಯಿಂದ ಪೂರೈಸಿ ಭಾರತಕ್ಕೆ ಮರಳಿದ ತಿಮ್ಮಯ್ಯನವರನ್ನು ಸೆಕೆಂಡ್ ಲೆಫ್ಟಿನೆಂಟ್ ದರ್ಜೆಯ ಸೇನಾಧಿಕಾರಿಯಾಗಿ ನೇಮಿಸಿ ಬೆಂಗಳೂರಿನಲ್ಲಿದ್ದ ಹೈಲೆಂಡ್ ಲೈಟ್ ಇನ್ ಫೆಂಟ್ರಿಗೆ ಕಳಿಸಿದರು (4-2-1926). 

	1927ರಲ್ಲಿ ತಿಮ್ಮಯ್ಯನವರು ಹೈದರಾಬಾದ್ ರೆಜಿಮೆಂಟಿಗೆ ವರ್ಗವಾಗಿ ಅದರೊಂದಿಗೆ ಬಾಗ್‍ದಾದಿಗೆ ತೆರಳಿದರು. ಮರುವರ್ಷ ಇವರು ತಮ್ಮ ಬೆಟಾಲಿಯನ್ನಿನೊಡನೆ ಸ್ವದೇಶಕ್ಕೆ ಮರಳಿ ಅಲಹಾಬಾದಿನಲ್ಲಿ ನೆಲೆಸಿದರು. ಆ ವೇಳೆಗೆ ದೇಶದಲ್ಲಿ ಸ್ವಾತಂತ್ರ್ಯಸಮರದ ಕಾವು ಕ್ರಮೇಣ ಪಸರಿಸುತ್ತಿತ್ತು. ಹೀಗಾಗಿ ಮೋತಿಲಾಲ ನೆಹರೂ ಅವರ ನೆಲೆವನೆ ಆಗಿದ್ದ ಅಲಹಾಬಾದಿಗೆ ವಿಶೇಷ ಪ್ರಾಮುಖ್ಯ ಬಂದಿತ್ತು. ಬ್ರಿಟಿಷ್ ಸೇನೆಯಲ್ಲಿ ಅಧಿಕಾರಿಗಳಾಗಿದ್ದ ತಿಮ್ಮಯ್ಯನವರಂಥ ತರುಣ ಭಾರತೀಯ ಅಧಿಕಾರಿಗಳು ಸಹಜವಾಗಿ ಮೋತಿಲಾಲರ ವರ್ಚಸ್ವೀ ವ್ಯಕ್ತಿತ್ವದಿಂದ ಆಕರ್ಷಿತರಾದರು. ತಾವು ಕೂಡ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಬೇಕೆಂದು ಈ ತರುಣರ ಆಸೆ, ಆದರೆ ಮೋತಿಲಾಲರು ಪ್ರವಾದಿಯಂತೆ ನುಡಿದು (1930) ಇವರನ್ನು ತಮ್ಮ ಹುದ್ದೆಯಲ್ಲಿಯೇ ಮುಂದುವರಿಯುವಂತೆ ಪ್ರೇರೇಪಿಸಿದರು. `ಇಂದಲ್ಲದಿದ್ದರೆ ನಾಳೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಲಭಿಸುವುದು ಶತಸ್ಸಿದ್ಧ. ಬ್ರಿಟಿಷರು ತೊಲಗಿ ಹೋದ ಬಳಿಕ ನಾವೇ ನಮ್ಮನ್ನು ರಕ್ಷಿಸಿಕೊಳ್ಳಬೇಕಾಗುತ್ತದೆ. ಅಂಥ ದಿನ ಬಂದಾಗ ನಮ್ಮ ಉಳಿವು ನಿಮ್ಮಂಥವರನ್ನೇ ಅವಲಂಬಿಸಿರುವುದು. 

	ಮುಂದೆ ಸ್ವಲ್ಪ ಕಾಲ ತಿಮ್ಮಯ್ಯನವರು ಬಲೂಚಿಸ್ತಾನದ ಗಡಿನಾಡಿನಲ್ಲಿ ದುಡಿದು ಕ್ವೆಟ್ಟಾದಲ್ಲಿದ್ದ ಬ್ರಿಟಿಷ್ ಸೇನಾಕೇಂದ್ರಕ್ಕೆ ವರ್ಗವಾಗಿ ಬಂದರು. ಇಪ್ಪತ್ತೆಂಟು ವಯಸ್ಸಿನ ತಿಮ್ಮಯ್ಯ ಅದೇ ವರ್ಷ ನೀನಾ ಕಾರ್ಯಪ್ಪ ಎನ್ನುವ ಕನ್ಯೆಯನ್ನು ಮದುವೆ ಆದರು. ಈ ದಂಪತಿಗಳು ಕ್ವೆಟ್ಟಕ್ಕೆ ಮರಳುವ ಹೊತ್ತಿಗೆ (1935) ಆ ಇಡೀ ವಲಯ ಭೀಕರ ಭೂಕಂಪನದ ಹತಿಯಿಂದ ಮೇರೆ ಇಲ್ಲದ ಸಾವುನೋವುಗಳಿಗೆ ಈಡಾಗಿತ್ತು; ನೊಂದ ಜನರಿಗೆ ಸಾಂತ್ವನ ನೀಡಿ ಅವರನ್ನು ಪುನರ್ವಸಿತರನ್ನಾಗಿಸುವಲ್ಲಿ ಇವರು ಅಮೋಘ ಸೇವೆ ಸಲ್ಲಿಸಿದರು. 1935ರಿಂದ 1939ರ ವರೆಗೆ ಕ್ಯಾಪ್ಟನ್ ತಿಮ್ಮಯ್ಯನವರು ಮದ್ರಾಸು ವಿಶ್ವವಿದ್ಯಾಲಯದ 5ನೆಯ ಮದ್ರಾಸದ ಬೆಟಾಲಿಯನ್ ಯುನಿವರ್ಸಿಟಿ ಟ್ರೈನಿಂಗ್ ಕೋರ್ ನ ಅಡ್ಜುಟೆಂಟ್ ಆಗಿದ್ದರು. 

	1939ರಲ್ಲಿ ಎರಡನೆಯ ಮಹಾಯುದ್ಧ ಪ್ರಾರಂಭವಾದಾಗ ಇವರನ್ನು ಸಿಂಗಾಪುರಕ್ಕೆ ವರ್ಗಮಾಡಿದರು. ಆ ವಲಯದಲ್ಲಿ ಜಪಾನೀಯರಿಂದ ದಾಳಿ ಸಂಭವಿಸಬಹುದು ಎಂಬ ಶಂಕೆ ಇತ್ತು. ಆದರೆ ನಡೆದದ್ದು ಬೇರೆಯೇ. ಬ್ರಿಟಿಷರ ದಬ್ಬಾಳಿಕೆಯ ನೀತಿಯನ್ನು ಎದುರಿಸಿ ಭಾರತೀಯ ಸೈನಿಕರು ಮುಷ್ಕರ ಹೂಡಿದರು. ಈ ಮುಗ್ಧಯೋಧರ ಮನವೊಲಿಸಿ ಅವರನ್ನು ಮತ್ತೆ ಕಾರ್ಯಪ್ರವತ್ತರನ್ನಾಗಿಸುವ ಹಾಗೂ ಅವರ ಧೃತಿ ಆತ್ಮಗೌರವಗಳನ್ನು ಪುನರ್ಭರಿಸುವ ಹೊಣೆ ತಿಮ್ಮಯ್ಯನವರದಾಗಿತ್ತು. ಇದನ್ನು ಅವರು ಅತ್ಯಂತ ದಕ್ಷವಾಗಿ ಸಾಧಿಸಿದರು. 

	1941ರಲ್ಲಿ ಭಾರತಕ್ಕೆ ಮರಳಿದ ತಿಮ್ಮಯ್ಯನವರನ್ನು ಆಗ್ರದಲ್ಲಿ ನೇಮಿಸಲಾಯಿತು. ಮರುವರ್ಷ ಸ್ವಾತಂತ್ರ್ಯ ಸಮರ ಉಲ್ಬಣಾವಸ್ಥೆಗೆ ತಿರುಗಿದಾಗ ತಿಮ್ಮಯ್ಯನವರ ದಂಡಿಗೆ ನಾಗರಿಕ ಕ್ಷೋಭೆಯನ್ನು ಹತೋಟಿಗೆ ತರುವ ಕರ್ತವ್ಯ ಬಂತು. ಇದು ಬಂದೂಕಿನ ಬಲದಿಂದ ಮಾತ್ರ ಸಾಧ್ಯ ಎಂಬ ಪ್ರಚಲಿತ ಅಭಿಪ್ರಾಯವನ್ನು ತಿಮ್ಮಯ್ಯನವರು ಹುಸಿಗೊಳಿಸಿದರು. ಸ್ವಬಾಂಧವರ ವಿರುದ್ಧ ಎಲ್ಲಿಯೂ ಗುಂಡುಗರೆಯದೇ ಮಾತಿನ ಮೋಡಿಯಿಂದಲೇ ಇವರು ಶಾಂತಿಪಾಲನೆ ಮಾಡಲು ಸಮರ್ಥರಾದರು. ಆಗ್ರಾದಿಂದ ಸ್ವಲ್ಪ ಕಾಲ ಮಲಯಾಕ್ಕೆ ಹೋಗಿ ಅಲ್ಲಿಂದ ಮರಳಿದೊಡನೆ ಕ್ವೆಟ್ಟಾದಲ್ಲಿನ ಮಿಲಿಟರಿ ಸ್ಟಾಫ್ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಪಡೆದರು. ಮುಂದೆ ತಿಮ್ಮಯ್ಯನವರು ಲೆಫ್ಟೆನೆಂಟ್ ಕರ್ನಲ್ ದರ್ಜೆ ಗಳಿಸಿ (1944) ಅರಕ್ಕಾನ್ ನಲ್ಲಿದ್ದ 25ನೆಯ ಇಂಡಿಯನ್ ಡಿಮಿಷನ್ನನ್ನು ಸೇರಿದರು. ಈ ವಲಯದ ಒಂದು ಅಯಕಟ್ಟಿನ ಪ್ರದೇಶದಲ್ಲಿ ಜಪಾನೀಯರು ಭದ್ರವಾಗಿ ನೆಲೆಸಿ ಮಿತ್ರ ಸೈನ್ಯಗಳಿಗೆ ತೀವ್ರವಾದ ಘಾಸಿ ಉಂಟುಮಾಡುತ್ತಿದ್ದರು. ಅದು ಒಂದು ಬೆಟ್ಟದ ಕೊಡಿ ಆಗಿದ್ದುದರಿಂದ ಶತ್ರುವಿಗೆ ರಕ್ಷಣೆಯ ಜೊತೆಗೆ ಮಿತ್ರಸೈನಿಕರ ಚಲನವಲನಗಳ ಮೇಲೆ ವಿಶೇಷ ನಿಯಂತ್ರಣವೂ ದೊರೆತ್ತಿತ್ತು. ತಮ್ಮ ಬಲಗಳು ಮುಂದೆ ಸಾಗಲು ಇದ್ದ ಹಾದಿ ಎಂದರೆ ಈ ಆಯಕಟ್ಟಿನ ನೆಲೆಯಿಂದ ಜಪಾನೀಯರನ್ನು ಹೊಡೆದಟ್ಟುವುದೇ ಎಂದು ಮನಗಂಡ ತಿಮ್ಮಯ್ಯನವರು ಈ ಹೋರಾಟಕ್ಕೆ ಬೇಕಾದ ಸವಿವರ ಯೋಜನೆಯನ್ನು ತಯಾರಿಸಿ ಮೇಲಧಿಕಾರಿಗಳಿಗೆ ಸಲ್ಲಿಸಿದರು. ಅವರು ಇವರ ಯೋಜನೆಯನ್ನೇನೋ ಒಪ್ಪಿಕೊಂಡರು. ಆದರೆ ಇವರ ನಿರೀಕ್ಷೆಯಂತಲ್ಲದೇ ಇದನ್ನು ನಿಭಾಯಿಸುವ ಹೊಣೆಯನ್ನು ಬ್ರಿಟಿಷ್ ಅಧಿಕಾರಿಯೋರ್ವನಿಗೆ ವಹಿಸಿದರು. ಸ್ವಸಾಮಥ್ರ್ಯವನ್ನು ಕುರಿತ ನಂಬಿಕೆಯ ಅತಿರೇಕದಲ್ಲಿ ವಿವೇಕವನ್ನು ಕಳೆದುಕೊಂಡಿದ್ದ ಆ ನಾಯಕ ಆ ಆಕ್ರಮಣದಲ್ಲಿ ವಿಪರೀತ ಹೊಡೆತ ತಿಂದು ಸೋತು ಹಿಂತಿರುಗಿದ. ತಿಮ್ಮಯ್ಯನವರು ಕಾಳಗತಾಣವನ್ನು ಪರಿವೀಕ್ಷಣೆ ಮಾಡಿದ ವಿಧಾನ ತಪ್ಪು, ಅವರು ನೀಡಿದ ಮಾಹಿತಿಯಲ್ಲಿದ್ದ ದೋಷದ ಪರಿಣಾಮವಾಗಿ ಈ ಸೋಲು ತಮಗೆ ಉಂಟಾಯಿತು ಎಂಬುದಾಗಿ ಬ್ರಿಟಿಷ್ ವರಿಷ್ಠರು ತಿಮ್ಮಯ್ಯನವರ ಮೇಲೆ ದೂರನ್ನೂ ಹೇರಲು ಸಂಚು ಹೂಡಿದ್ದರು. ಇದರ ಯಶಸ್ವೀ ನಿವಾರಣೆಗೆ ಇದ್ದ ಮಾರ್ಗ ಒಂದೇ - ಸ್ವತಃ ತಾನೇ ಜಪಾನೀಯರನ್ನು ಹನನ ಮಾಡುವುದು; ಮೇಲಿನ ಅಧಿಕಾರಿಗಳಿಗೆ ತಿಳಿಯದಂತೆ (ಇದು ತೀವ್ರ ಅಶಿಸ್ತು) ಇವರು ಈ ಹೋರಾಟವನ್ನು ನಡೆಸಿಯೇ ಬಿಟ್ಟರು. ಇವರ ಯೋಧರ ಒಂದು ತಂಡ ಜಪಾನೀಯರ ಲಕ್ಷ್ಯವನ್ನು ಬೇರೆ ಕಡೆಗೆ ಸೆಳೆಯಲು ಸಾಕಷ್ಟು ಸ್ಫೋಟನೆ ಗಲಭೆಗಳನ್ನು ಒಂದೆಡೆ ಮಾಡುತ್ತಿದ್ದಂತೆ ಆ ಅಪರಾತ್ರಿಯಲ್ಲಿ ಇನ್ನೊಂದು ತಂಡ ಬೆಕ್ಕಿನ ಹೆಜ್ಜೆಗಳಿಂದ ಬೆಟ್ಟದ ಕೂರಂಚನ್ನು ಏರಿ ಜಪಾನೀಯರು ಏನಾಗಿದೆ ಎಂದು ಅರಿಯುವ ಮೊದಲೇ ಅವರನ್ನು ಸದೆ ಬಡಿದು ಕೊಂದು ಬೆಟ್ಟದ ನೆತ್ತಿಯನ್ನು ವಶಪಡಿಸಿಕೊಂಡಿತ್ತು. ಇಲ್ಲಿ ತಿಮ್ಮಯ್ಯನವರು ತಮ್ಮ ಭವಿಷ್ಯದೊಡನೆ ಲೆತ್ತ ಆಡಿದ್ದರು ಎಂಬುದನ್ನು ಮರೆಯಬಾರದು. ವರಿಷ್ಠರು ತಿಮ್ಮಯ್ಯನವರ ದಿಟ್ಟತನವನ್ನು ಶ್ಲಾಘಿಸಿದರು (ಗೆಲುವಿನಂತೆ ಗೆಲ್ಲುವಂತಹದು ಯಾವುದೂ ಇಲ್ಲವಾದ್ದರಿಂದ ತಿಮ್ಮಯ್ಯನವರ `ಅಶಿಸ್ತು ಬೆಳಕಿಗೆ ಬರಲೇ ಇಲ್ಲ!) ಅಲ್ಲಿಂದ ಮುಂದೆ ಬರ್ಮ ವಲಯದ ವಿವಿಧ ಕದನಗಳಲ್ಲಿ ಭಾಗವಹಿಸಿದ ತಿಮ್ಮಯ್ಯನವರು ಒಂದೊಂದು ಕಡೆಯಲ್ಲೂ ಜಯ ಗಳಿಸಿದರು. ಯುದ್ಧರಂಗದಲ್ಲಿ ಬ್ರಿಗೇಡ್ ನಾಯಕನಾದ ಪ್ರಥಮ ಭಾರತೀಯ ತಿಮ್ಮಯ್ಯನವರೇ. ಅವರ ಹಿರಿಮೆಯನ್ನು ಗುರುತಿಸಿ ಸರ್ಕಾರ ತಿಮ್ಮಯ್ಯನವರಿಗೆ ಡಿಸ್ಟಿಂಗ್‍ವಿಷ್ಡ್ ಸರ್ವಿಸ್ ಆರ್ಡರ್ (ಡಿ.ಎಸ್.ಓ.) ಪ್ರಶಸ್ತಿ ನೀಡಿ ಸನ್ಮಾನಿಸಿತು. 

	ಮುಂದೆ ಜಪಾನೀಯರು ಶರಣಾಗತರಾದಾಗ (1945) ಸಿಂಗಾಪುರದಲ್ಲಿ ನಡೆದ ಶಾಂತಿ ಸಭೆಯಲ್ಲಿ ತಿಮ್ಮಯ್ಯನವರಿಗೂ ಹಾಜರಾಗುವ ಗೌರವ ದೊರೆತಿತ್ತು. ಜಪಾನನ್ನು ಮಿತ್ರಸೇನಾಬಲಗಳು ವಶಪಡಿಸಿಕೊಂಡಾಗ ಅಲ್ಲಿನ ಒಂದು ವಿಭಾಗದ ನಾಯಕರಾಗಿ ತಿಮ್ಮಯ್ಯನವರನ್ನು ನೇಮಿಸಲಾಯಿತು. ಆದರೆ ಈ ವೇಳೆಗೆ ಭಾರತಕ್ಕೆ ಸ್ವಾತಂತ್ರ್ಯಪ್ರಾಪ್ತಿ ಖಾತ್ರಿ ಆಗಿದ್ದುದರಿಂದ ಸೈನ್ಯದ ಭಾರತೀಕರಣ ಅತೀ ತ್ವರೆಯಿಂದ ನಡೆಯಬೇಕಾಗಿತ್ತು. ಬ್ರಿಗೇಡಿಯರ್ ತಿಮ್ಮಯ್ಯನವರು ಭಾರತ ಸೇನಾಬಲಗಳ ರಾಷ್ಟ್ರೀಕರಣ ಸಮಿತಿಯನ್ನು (ನವದೆಹಲಿ) ಜನವರಿ 1947ರಲ್ಲಿ ಸೇರಿಕೊಂಡರು. ಭಾರತದ ವಿಭಜನೆಯ ದಿನಗಳಂದು ಮೇಜರ್ ಜನರಲ್ ತಿಮ್ಮಯ್ಯನವರನ್ನು ಲಾಹೋರ್ ವಿಭಾಗದಲ್ಲಿ ನೇಮಿಸಿದ್ದರು. ಕೋಮುವಾರು ಗಲಭೆಗಳನ್ನು ತಡೆಗಟ್ಟುವುದು, ಪ್ರವಾಹರೂಪದಲ್ಲಿ ಬರುತ್ತಿದ್ದ ಮತ್ತು ಹೋಗುತ್ತಿದ್ದ ನಿರ್ವಸಿತರನ್ನು ಕಾಪಾಡುವುದು, ಸಾಮೂಹಿಕ ಶಾಂತಿಯನ್ನು ರಕ್ಷಿಸುವುದು ಇವೇ ಮುಂತಾದವು ತಿಮ್ಮಯ್ಯನವರ ಹೊಣೆಗಳಾಗಿದ್ದವು. 

	ಇದೇ ವೇಳೆ (20-10-1947) ಪಾಕಿಸ್ತಾನದ ಪ್ರೇರಣೆ ಪ್ರೋತ್ಸಾಹ ಪಡೆದ ಬುಡಕಟ್ಟಿನ ಜನಾಂಗದವರು ಸಾವಿರ ಸಾವಿರ ಸಂಖ್ಯೆಯಲ್ಲಿ ಹಠಾತ್ತಾಗಿ ಕಾಶ್ಮೀರದ ಮೇಲೆ ದಾಳಿ ಮಾಡಿದರು. ಕಾಶ್ಮೀರವನ್ನು ಕೊಳ್ಳೆಹೊಡೆದು ಇಡೀ ರಾಜ್ಯವನ್ನು ಪಾಕಿಸ್ತಾನ ಕಬಳಿಸಲು ನೆರವಾಗಬೇಕು ಎಂಬುದು ಇದರ ಹಿನ್ನಲೆಯಲ್ಲಿದ್ದ ಉದ್ದೇಶ. ಸ್ವತಃ ಶ್ರೀನಗರದಿಂದ ನಾಲ್ಕು ಮೈಲು ದೂರದ ವರೆಗೆ ದಾಳಿ ಕೋರರು ಮುಂದೋತ್ತಿ ಬಂದಿದ್ದರು. ಇಂಥ ಸನ್ನಿವೇಶವನ್ನು ಎದುರಿಸಲು ತಿಮ್ಮಯ್ಯನವರನ್ನು ಭಾರತ ಸರ್ಕಾರ ನೇಮಿಸಿತು. (ಏಪ್ರಿಲ್ 1948). ಪರಿಸ್ಥಿತಿಯನ್ನು ಆಮೂಲಾಗ್ರವಾಗಿ ಪರಿಶೀಲಿಸಿ ಜೂನ್ 1 ರಂದು ತಿಮ್ಮಯ್ಯನವರು ಪ್ರತ್ಯಾಕ್ರಮಣವನ್ನು ಪ್ರಬಲವಾಗಿ ತೊಡಗಿಯೇ ಬಿಟ್ಟರು. ಟ್ಯಾಂಕುಗಳಿಗೆ ಶಾಶ್ವತ ಕಂದಗಳಿಗೆ ಅವೇ ಟ್ಯಾಂಕುಗಳನ್ನು ಅತಿ ಕ್ಷಿಪ್ರವಾಗಿ ಹಾಗೂ ಗುಪ್ತವಾಗಿ ಸಾಗಿಸಿ ಶತ್ರುವಿಗೆ ಸರಿಯಾದ ಹೊಡೆತವನ್ನು ತಿಮ್ಮಯ್ಯನವರು ನೀಡಿ ಕಾಶ್ಮೀರದ ಬಹುಭಾಗವನ್ನು ರಕ್ಷಿಸಿದರು. ತಿಮ್ಮಯ್ಯವನರು ಪ್ರದರ್ಶಿಸಿದ ನವಯುದ್ಧ ತಂತ್ರಗಳನ್ನು ಬಲ್ಲವರು ಬಹುವಾಗಿ ಶ್ಲಾಘಿಸಿದ್ದಾರೆ. 

	ಕಾಶ್ಮೀರದ ರಂಗದಿಂದ ಮುಂದೆ ತಿಮ್ಮಯ್ಯನವರನ್ನು ಡೆಹರಾಡೂನಿನ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ ಮುಖ್ಯಾಧಿಕಾರಿಯಾಗಿ ವರ್ಗ ಮಾಡಿದರು. ಅಲ್ಲಿಂದ ಮುಂದೆ ಇವರು ಕ್ವಾರ್ಟರ್ ಮಾಸ್ಟರ್ ಜನರಲ್ ಆಗಿ ನೇಮಕಗೊಂಡರು. ಸೇನೆಯ ಸೇವಾವ್ಯವಸ್ಥೆಗಳಲ್ಲಿ ಶಾಶ್ವತವಾದ ಸುಧಾರಣೆಗಳನ್ನು ತಂದದ್ದು ತಿಮ್ಮಯ್ಯನವರ ಹಿರಿಮೆ. 1953 ರ ತರುಣದಲ್ಲಿ ಇವರು ಲೆಫ್ಟಿನೆಂಟ್ ಜನರಲ್ ಪದವಿಯನ್ನು ಪಡೆದು ಪಶ್ಚಿಮ ವಿಭಾಗದ ಮುಖ್ಯಸ್ಥರಾಗಿ ನೇಮಕಗೊಂಡರು. 1953 ರ ಮೇಯಲ್ಲಿ ಭಾರತ ಸರ್ಕಾರ ತಿಮ್ಮಯ್ಯನವರನ್ನು ವಿಶ್ವಸಂಸ್ಥೆಯ ತಟಸ್ಥ ರಾಷ್ಟ್ರಗಳ ಪುನರ್ದೇಶಾವರ್ತನ ಆಯೋಗದ ಅಧ್ಯಕ್ಷರಾಗಿ ಯುದ್ಧಜರ್ಝರಿತ ಕೊರಿಯಾಕ್ಕೆ ಕಳಿಸಿತು. ಅಲ್ಲಿ ಇವರು ನಡೆದುಕೊಂಡ ರೀತಿ ಇವರಿಗೂ ಭಾರತಕ್ಕೂ ಅಪಾರ ಗೌರವವನ್ನು ತಂದಿತು. ಕೊರಿಯಾ ವೀರನಾಗಿ ಸ್ವದೇಶಕ್ಕೆ ಮರಳಿದ (1954) ತಿಮ್ಮಯ್ಯನವರನ್ನು ರಾಜಾಜಿಯವರು ಸೈನಿಕ ಋಷಿ ಎಂದು ಕರೆದರು. ಭಾರತ ಸರ್ಕಾರ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಈ ಯುದ್ಧವೀರ ಶಾಂತಿದೂತನನ್ನು ಗೌರವಿಸಿತು. 

	1957ರ ಮೇ 4ರಂದು ತಿಮ್ಮಯ್ಯನವರು ಜನರಲ್ ದರ್ಜೆ ಸಮೇತ ಭಾರತದ ವರಿಷ್ಠ ಸೇನಾನಾಯಕರಾಗಿ ನೇಮಕಗೊಂಡರು. ದೇಶದ ಅವಿಭಾಜ್ಯ ಅಂಗವಾಗಿ ಸ್ವತಂತ್ರ ಭಾರತದ ಸೈನ್ಯಕ್ಕೆ ವ್ಯಕ್ತಿತ್ವವನ್ನು ಮತ್ತು ಕ್ರಿಯಾಪಾತ್ರವನ್ನು ನೀಡುವಲ್ಲಿ ತಿಮ್ಮಯ್ಯನವರು ಬಹುವಾಗಿ ಶ್ರಮಿಸಿದರು. ಒಮ್ಮೆ ಇವರ ನಿಲುವಿಗೂ ಸಕಾರದ ನೀತಿಗೂ ತಾಳೆ ಬೀಳದಿದ್ದಾಗ ಇವರು ಸೇನಾನಾಯಕತ್ವದಿಂದ ತನ್ನನ್ನು ವಿಮೋಚನೆಗೊಳಿಸಬೇಕೆಂದು ಪ್ರಧಾನಿಯನವರಿಗೆ ರಾಜೀನಾಮೆ ಸಲ್ಲಿಸಿದ್ದರು. ಆದರೆ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರೂ ಅವರ ಗುಣ ಗ್ರಾಹಿತ್ವ ಈ ತೊಡಕಿನ ಸನ್ನಿವೇಶದಿಂದ ತಿಮ್ಮಯ್ಯನವರನ್ನು ಎಂತೋ ದೇಶವನ್ನೂ ಅಂತೆಯೇ ಪಾರುಮಾಡಿತು. ಏಪ್ರಿಲ್ 1961ರಲ್ಲಿ ಜನರಲ್ ತಿಮ್ಮಯ್ಯನವರು ತಮ್ಮ ಸೇವಾವೃತ್ತಿಯಿಂದ ನಿವೃತ್ತರಾದರು. 

	ನಿಜವಾದ ಸೈನಿಕನಿಗೆ ನಿವೃತ್ತಿ ಎಂಬುದೇ ಇಲ್ಲ. ತಿಮ್ಮಯ್ಯನವರ ಸೇವೆಯನ್ನು ವಿಶ್ವಸಂಸ್ಥೆಯ ಪರವಾಗಿ ಸೈಪ್ರಸ್‍ಗೆ ನೀಡಲಾಯಿತು (1964). ಗ್ರೀಕರಿಗೂ ತುರ್ಕಿಯವರಿಗೂ ನಡುವೆ ಶಾಂತಿಪಾಲನೆ ಮಾಡುವುದು ಈ ಸೇನಾನಿಯ ಹೊಣೆಯಾಗಿತ್ತು. ಉಭಯ ಪಕ್ಷಗಳ ಪ್ರೀತಿವಿಶ್ವಾಸಗಳನ್ನು ಗಳಿಸಿ ತಮ್ಮ ಕಾರ್ಯವನ್ನು ಸಮರ್ಥವಾಗಿ ನೆರವೇರಿಸುತ್ತಿದ್ದ ವೇಳೆಯಲ್ಲೇ ಅಕಸ್ಮಾತ್ ಹೃದಯಾಘಾತದಿಂದ ತಿಮ್ಮಯ್ಯನವರ ಚೇತನ ಸ್ತಬ್ಧವಾಗಿ ಹೋಯಿತು (18-12-1965). 

	ತಮ್ಮ ಜನರ, ತಮ್ಮ ದೇಶದ, ತಾವು ನಂಬಿ ಕಾಪಾಡಿಕೊಂಡು ಬಂದಿದ್ದ ಮೌಲ್ಯಗಳ ರಕ್ಷಣೆಯಲ್ಲಿಯೂ ಸೇವೆಯಲ್ಲಿಯೂ ತಮ್ಮನ್ನು ತಾವೇ ತೇದುಕೊಂಡು ಶಾಶ್ವತ ಕೀರ್ತಿವಂತರಾದ ಮಹಾನಾಯಕರ ಸಾಲಿನಲ್ಲಿ ತಿಮ್ಮಯ್ಯನವರ ಹೆಸರು ಸೇರುತ್ತದೆ. 							   				  	          (ಬಿ.ಸಿ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ